Monday 12 March 2012

ಕನಸಿನ ಊರಿನ ಕದ ತೆರೆದ ಮಹಿಳೆಯರು

ಇದು ಕೆರೆ ಕಟ್ಟಿದ ಮಹಿಳೆಯರ ಕಥೆ. ಗ್ರಾಮದ ಗಂಡಸರು ಮುಖ ತಿರುಗಿಸಿ ಹೊರಟಾಗ ಮಹಿಳೆಯರೇ ಗುದ್ದಲಿ, ಪಿಕಾಸಿ, ಹಾರೆ ಹಿಡಿದು ಕೆರೆಯ ಹೂಳೆತ್ತಿ, ನೀರಿನ ಮಾರ್ಗ ರೂಪಿಸಿ ಕೆರೆ ತುಂಬುವಂತೆ ಮಾಡಿ ಸೈ ಅನಿಸಿಕೊಂಡ ಸಾಹಸಗಾಥೆ. ಇಲ್ಲಿನ ಮಹಿಳೆಯರೀಗ ಕನಸಿನ ಊರಿನ ಕದ ತೆರೆದ ಧೀರ ಮಹಿಳೆಯರು ಗಂಡಸರ ಕಣ್ಣಲ್ಲಿ ಕಂಗೊಳಿಸುತ್ತಿದ್ದಾರೆ.`ಅಲ್ನೋಡಿ ನೀರು ಹೇಗೆ ನಿಂತಿದೆ. ಸಾಂಪ್ರದಾಯಿಕ ತಲಪರಿಗೆ ಅದು...` ಎಂದಾಗ ಕ್ಷಣ ಅವಕ್ಕಾದೆ. ಆರು ವರ್ಷದ ಹಿಂದೆ ನೀವು ಬರಬೇಕಿತ್ತು. ಬರೀ ಒಣಗಿದ, ಬೀಡು ಬಿಟ್ಟ ಕೆರೆ ಕಾಣುತ್ತಿತ್ತು, ಗುಳೇ ಹೋಗುವ ಆತಂಕ ಎದುರಿಸುತ್ತಿದ್ದೆವು. ಈಗ ನೋಡಿ ಎಂದಾಗ ಅನಿತಾಲಕ್ಷೀ ಮುಖದ ತುಂಬಾ ನಗೆಯ ಹೊರಳು.
ಮಳೆ ಇಲ್ಲ, ಕೆರೆ ಬತ್ತಿದೆ ಎಂದು ಜಿಲ್ಲೆಯ ಎಲ್ಲೆಡೆ ಹೇಳುತ್ತಾರೆ. ನಮ್ಮೂರಲ್ಲೂ ಅದೇ ಮಾತು ಹೇಳು ತ್ತಿದ್ದರು. ಆದರೆ ಮಳೆ ಕಡಿಮೆ ಇದ್ದರೂ ಕೆರೆ ತುಂಬಿದೆ. ಎಲ್ಲೆಡೆ ಬರದಿಂದ ಕಂಗೆಟ್ಟಿದ್ದರೂ ನಮ್ಮೂರಲ್ಲಿ 35 ಎಕರೆ ಭೂಮಿ ಬತ್ತದ ಪೈರುಗಳಿಂದ ಕಂಗೊಳಿಸುತ್ತಿದೆ. ಇದು ಮಳೆ ನೀರು... ಹೀಗೆ ಹೇಳುತ್ತಿದ್ದ ಮಧುಗಿರಿ ತಾಲ್ಲೂಕಿನ ಬಸವನಹಳ್ಳಿ ಗ್ರಾಮದ ಅಷ್ಟು ಮಹಿಳೆಯರ ಸಂತಸಕ್ಕೇ ಪಾರವೇ ಇರಲಿಲ್ಲ.
ನೀರು ಬಳಕೆದಾರರ ಸಂಘದ ಮೂಲಕ ಬಸವನಹಳ್ಳಿ ಕೆರೆ ಅಭಿವೃದ್ಧಿಗೆ ಸರ್ಕಾರ 2006ರಲ್ಲಿ ರೂ. 8 ಲಕ್ಷ ವೆಚ್ಚದ ಯೋಜನೆ ರೂಪಿಸಿತ್ತು. ಮೊದಲು ನಗೆಯ ಮಲ್ಲಿಗೆಯಾಗಿದ್ದ ಗ್ರಾಮದ ಗಂಡಸರು ಬಳಕೆದಾರರ ಸಂಘದ ಕಾರ್ಯಕಾರಿ ಸಮಿತಿಯ ಆಯ್ಕೆ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಮುಖ ತಿರುಗಿಸಿ ನಿಂತರು. ಅಧಿಕಾರಿ ವರ್ಗ ಹತ್ತಾರು ಬಾರಿ ಗ್ರಾಮಕ್ಕೆ ಭೇಟಿ ನೀಡಿದರೂ ಶೂನ್ಯಫಲ. `ಜನರ ಸಹಕಾರ ಇಲ್ಲ, ಕೆರೆ ಕೆಲಸ ಸಾಧ್ಯವಿಲ್ಲ` ಎಂದು ಅಧಿಕಾರಿ ವರ್ಗ ಷರಾ ಬರೆಯಿತು.
`ಕೆರೆಗೆ ನೀರು ಬಂದರೆ ಗ್ರಾಮ ಹಸಿರು ಹೊದ್ದು ನಿಲ್ಲಲಿದೆ. ನೀರಿನ ಸಂಕಟ ತಪ್ಪಲಿದೆ. ತೋಟ ಬೆಳೆದು, ಬದುಕು ಹಸನಾಗಲಿದೆ` ಎಂದು ಮನೆಯಲ್ಲೇ ಕನಸು ಕಾಣುತ್ತಿದ್ದ ನಮಗೆ ಗಂಡಸರ ನಡೆ ದಿಗ್ಭ್ರಾಂತರನ್ನಾಗಿ ಮಾಡಿತು. ದಿನಗಟ್ಟಲೆ ಚರ್ಚೆ ಮಾಡಿದೆವು. ದಿನ ಕಳೆ ದಂತೆ ಕೆರೆ ತುಂಬಿದ ಕನಸು ಬಲವಾಗುತ್ತಲೇ ಹೋಯಿತು. 
ಒಂದಿಬ್ಬರು ಮಹಿಳೆಯರ ಕನಸು ಗ್ರಾಮದ ಮಹಿಳೆಯರ ಕನಸು ಆಯಿತು. ಗಂಡಸರು ಬೇಡವೇ ಬೇಡ, ನಾವೇ ಏಕೆ ಸಂಘ ರಚಿಸಿ ಕೆರೆ ಕಟ್ಟ ಬಾರದು ಎಂದು ಟೊಂಕ ಕಟ್ಟಿ ನಿಂತೆವು` ಎಂದು ನೆನಪು ಹಂಚಿಕೊಂಡರು ಅನಿತಾಲಕ್ಷ್ಮೀ.<br/>
`ಮಹಿಳೆಯರೇ ಷೇರು ಹಾಕಿ ಗಂಡಸರ ಕಣ್ಮುಂದೆಯೇ ಬಸವನಹಳ್ಳಿ ಆಂಜನೇಯ ಕೆರೆ ಬಳಕೆದಾರರ ಸಂಘ ಅಸ್ತಿತ್ವಕ್ಕೆ ಬಂದು ಕಾರ್ಯಕಾರಿ ಸಮಿತಿ ಕೂಡ ರಚನೆಯಾಯಿತು. ಕೆರೆ ಕಟ್ಟಲು ನಾವು ಇಳಿದಾಗ ಗಂಡಸರು ಮೊದಮೊದಲು ನಂಬಲಿಲ್ಲ. ನಾವು ಛಲ ಬಿಡಲಿಲ್ಲ. ಅಷ್ಟರಲ್ಲಿ ಸರ್ಕಾರದಿಂದ ರೂ.8 ಲಕ್ಷ ಹಣ ಬಂತು. ಕೆರೆ ಕಟ್ಟುವ ಕೆಲಸ ಆರಂಭವಾಯಿತು` ಎನ್ನುತ್ತಾರೆ.
ಮಹಿಳೆಯರ ಶ್ರಮ ಮತ್ತು ಕಾರ್ಯತತ್ಪರತೆ ಮೆಚ್ಚಿದ ಜಿಲ್ಲಾಡಳಿತ ಹೆಚ್ಚುವರಿಯಾಗಿ ರೂ.2 ಲಕ್ಷ ನೀಡಿತು. ಸರ್ಕಾರದ ಹಣದಲ್ಲಿ ಯಂತ್ರೋಪಕರಣ, ಸಿಮೆಂಟ್, ಜಲ್ಲಿಕಲ್ಲು ಇತ್ಯಾದಿ ಖರೀದಿಸಿದರು. ಮಹಿಳೆಯರೆಲ್ಲ ಪುಕ್ಕಟೆ ದುಡಿದರು. ಬಿಸಿಲು, ನೆರಳೆನ್ನದೆ ಮಣ್ಣು ಹೊತ್ತು 17.5 ಎಕೆರೆ ವಿಸ್ತೀರ್ಣದ ಕೆರೆಯಲ್ಲಿ 4000 ಕ್ಯೂಬಿಕ್ ಮೀಟರ್ ಹೂಳೆತ್ತಿದರು ಎನ್ನುತ್ತಾರೆ ಯೋಜನಾ ಘಟಕದ ಜಿಲ್ಲಾ ಸಮನ್ವಯಾಧಿಕಾರಿ ಎಂ.ಜಿ.ಪದ್ಮಾಪ್ರಭ.
ಸಂಘಕ್ಕೆ ಸರ್ಕಾರ ನೀಡಿದ ರೂ. 1 ಲಕ್ಷ ಸುತ್ತು ನಿಧಿ ಸದಸ್ಯರಲ್ಲಿ ಐದು ಬಾರಿ ಹಂಚಿಕೆಯಾಗಿದೆ. ಕೆರೆ ಯಲ್ಲೆಗ ಮೀನು ಸಾಕತೊಡಗಿದ್ದಾರೆ. ಕಳೆದ ವರ್ಷ ಮೀನು ಹರಾಜಿನಿಂದ ರೂ. 16,500 ಆದಾಯ ಬಂದಿದೆ. ಈ ಹಣ ಸಹ ಕೆರೆ ಅಭಿವೃದ್ಧಿಗೆ ಬಳಸುತ್ತಿರು ವುದು ಮಹಿಳೆಯರ ಕೆರೆಯ ಪ್ರೀತಿಗೆ ಸಾಕ್ಷಿಯಾಗಿದೆ.ಹೂಳಿನಿಂದ ಮುಚ್ಚಿಹೋಗಿದ್ದ 2 ತಲಪರಿಗೆಯನ್ನು ಸರ್ಕಾರಿ ಎಂಜಿನಿಯರ್‌ಗಳು ಕೆರೆ ಅಭಿವೃದ್ಧಿಗೆ ಕಾರ್ಯಯೋಜನೆ ತಯಾರಿಸಿದಾಗ ನಿರ್ಲಕ್ಷಿಸಿದ್ದರು. ಆದರೆ ತಲಪರಿಗೆ ಲಾಭ ಗೊತ್ತಿದ್ದ ಮಹಿಳೆಯರು ಜಿಲ್ಲಾಧಿಕಾರಿಗೆ ಪಟ್ಟು ಹಿಡಿದು ತಲಪರಿಗೆ ಅಭಿವೃದ್ಧಿಗೆ ಸರ್ಕಾರಿಂದ ರೂ. 30 ಸಾವಿರ ಪಡೆದು ಅಭಿವೃದ್ಧಿ ಪಡಿಸಿದ್ದಾರೆ.
ಕಳೆದ ವರ್ಷ ಕೆರೆಯಲ್ಲಿ ನೀರು ಖಾಲಿಯಾದಾಗ ಬತ್ತ ಕೊಯ್ಲಾಗಲು ಇನ್ನೂ 20 ದಿನ ಬಾಕಿಯಿತ್ತು. ಆಗ ನೆರವಿಗೆ ಬಂದಿದ್ದು ತಲಪರಿಗೆ. ಈ ನೀರನ್ನು ತೂಬಿನ ಮೂಲಕ ಗದ್ದೆಗೆ ಹರಿಸಿ ಗ್ರಾಮಸ್ಥರು ಬೆಳೆ ದಕ್ಕಿಸಿಕೊಂಡರು. ಬಳಕೆದಾರರ ಸಂಘದ ಅಧ್ಯಕ್ಷೆ ಅನಿತಾಲಕ್ಷ್ಮೀ ಮತ್ತವರ ತಂಡದ ಸಾಧನೆಗೆ ಗ್ರಾಮಕ್ಕೆ ಗ್ರಾಮವೇ ಬೆರಗಾಗಿದೆ.
ಇದೀಗ ಆಂಧ್ರಪ್ರದೇಶ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿ ಯಶೋಗಾಥೆಯನ್ನು ದಾಖಲಿಸಿಕೊಂಡಿದ್ದಾರೆ. ರಾಷ್ಟ್ರದ ನೂರಾರು ಗ್ರಾಮಗಳಿಗೆ ಬಸವನಹಳ್ಳಿಯ ಮಹಿಳೆಯರೀಗ `ಐಕಾನ್`ಳಾಗಿದ್ದಾರೆ.<br/>
ಹೀಗಿದೆ ತಲಪರಿಗೆ...
ಬಸವನಹಳ್ಳಿ ಕೆರೆ ಅಂಗಳದಲ್ಲಿ ವೃತ್ತಾಕಾರದ 2 ತಲಪರಿಗೆ ನೀರು ತುಂಬಿಕೊಂಡು ನಳ- ನಳಿಸುತ್ತಿವೆ. ನೆಲಮಟ್ಟದಿಂದ 2 ಅಡಿ ಎತ್ತರಕ್ಕೆ 30 ಅಡಿ ವ್ಯಾಸದಲ್ಲಿ ಹಾಕಿದ ಬದುವಿನ ಕೆಳಗೆ 8 ಅಡಿ ಆಳದ ವೃತ್ತಾಕಾರದ ಗುಂಡಿಗಳಿವೆ. ಅವುಗಳ ತಳಭಾಗದಲ್ಲಿ  ತಿಳಿ ನೀರು ಸಂಗ್ರಹವಾಗಿದೆ.ಗುಂಡಿಗಳಿಗೆ ಹೊಂದಿಕೊಂಡಂತೆ ತೋಡಿರುವ ಕಾಲುವೆಗಳ ಮೂಲಕ ನೀರು ತೂಬಿನತ್ತ ಹರಿ ಯುತ್ತಿದೆ. ಒಂದು ತಲಪರಿಗೆಗೂ ಮತ್ತೊಂದಕ್ಕೂ 50 ಅಡಿ ಅಂತರದಲ್ಲಿ ಪ್ರತ್ಯೇಕ ಕಾಲುವೆಗಳಿವೆ. ತೂಬು ಸೇರುವ ಮುನ್ನ ಈ ಕಾಲುವೆಗಳು ಕೂಡಿಕೊಳ್ಳುತ್ತವೆ.ಒಂದು ತಲಪರಿಗೆಗೆ ಪೂರ್ವ ಭಾಗದ ಬೆಟ್ಟದಿಂದ ನೀರು ಬಂದರೆ, ಮತ್ತೊಂದಕ್ಕೆ ಪಶ್ಚಿಮದ ಕಡೆಯ ಬೆಟ್ಟದ ನೀರು ಆಧಾರ. ನೀರಿನ ಮೂಲ ಭಿನ್ನವಾದುದರಿಂದ ಎರಡರಲ್ಲೂ ಯಥೇಚ್ಛ ನೀರು ಲಭ್ಯ. ಕಡು ಬೇಸಿಗೆಯಲ್ಲೂ ಈ ತಲಪರಿಗೆಗಳಲ್ಲಿ ನೀರು ನಿಂತೇ ಇರುತ್ತದೆ ಎನ್ನುತ್ತಾರೆ ಸಂಘದ ಕಾರ್ಯದರ್ಶಿ ಸಣ್ಣರಂಗಮ್ಮ</p>

ತುಮಕೂರು ವಿ.ವಿ.ಗೆ ಯುಜಿಸಿ ಮಾನ್ಯತೆ

ತುಮಕೂರು: . ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗವು ವಿ.ವಿ.ಗೆ 12 (ಬಿ) ಮಾನ್ಯತೆ ನೀಡಿದೆ. 8 ವರ್ಷ ಕಾಲದ ಕನಸು ಸಾಕಾರಗೊಂಡಿದೆ.<br/>
ಸ್ವಂತ ಕಟ್ಟಡ, ಪ್ರಾಧ್ಯಾಪಕ ವರ್ಗ, ಮೂಲಭೂತ ಸೌಲಭ್ಯಗಳ ಕೊರತೆ ಕಾರಣದಿಂದಾಗಿ 8 ವರ್ಷಗಳಿಂದಲೂ ಯುಜಿಸಿಯಿಂದ ಯಾವುದೇ ಅನುದಾನ ಪಡೆಯದೆ ಬಳಲುತ್ತಿದ್ದ ವಿಶ್ವವಿದ್ಯಾನಿಲಯಕ್ಕೆ ಇನ್ನು ಮುಂದೆ ಸಾಕಷ್ಟು ಅನುದಾನ ಹರಿದುಬರಲಿದೆ. ಯುಜಿಸಿ ಮಾನ್ಯತೆ ಇಲ್ಲದ ಕಾರಣಕ್ಕಾಗಿ ಪದವಿ, ಸ್ನಾತಕೋತ್ತರ ಪದವಿ ಪಡೆದ ಪದವೀಧರರು, ಇಲ್ಲಿನ ಪ್ರಾಧ್ಯಾಪಕ ವರ್ಗ ಇಷ್ಟು ವರ್ಷ ಕಾಲ ಒಂದು ರೀತಿ ಅನಾಥಪ್ರಜ್ಞೆಯಿಂದ ನರಳುತ್ತಿದ್ದರು.ಇದೀಗ 12 (ಬಿ) ಮಾನ್ಯತೆಗೆ ಪಾತ್ರವಾಗಿರುವುದರಿಂದ ಇನ್ನು ಮುಂದೆ ಕೋಟ್ಯಂತರ ರೂಪಾಯಿ ಕೇಂದ್ರಿಯ ಅನುದಾನ ವಿ.ವಿ.ಗೆ ಹರಿದುಬರಲಿದೆ. ಇಲ್ಲಿನ ಪ್ರಾಧ್ಯಾಪಕ ವರ್ಗ ಸಂಶೋಧನೆ, ಪ್ರಬಂಧ ಮಂಡನೆ, ಉನ್ನತ ಶಿಕ್ಷಣ ಪಡೆಯಲು ಸಾಕಷ್ಟು ಅವಕಾಶ ಸಿಗಲಿದೆ. ಅಲ್ಲದೆ ವಿಶ್ವವಿದ್ಯಾನಿಲಯವು ಅನೇಕ ಹೊಸ ಹೊಸ ಕೋರ್ಸ್ ಆರಂಭಿಸಲು ಅನುದಾನ ಪಡೆಯಬಹುದಾಗಿದೆ.ಸ್ವಂತ ಕಟ್ಟಡ, ಮೂಲಭೂತ ಸೌಕರ್ಯ ಇಲ್ಲ ಎಂಬ ಕಾರಣಕ್ಕಾಗಿ ಈ ಹಿಂದೆ ವಿಶ್ವವಿದ್ಯಾನಿಯದ ಧನ ಸಹಾಯ ಆಯೋಗವು ಮಾನ್ಯತೆ ನೀಡಲು ನಿರಾಕರಿಸಿತ್ತು. ಅಕ್ಟೋಬರ್ 2011ರಂದು ವಿಶ್ವವಿದ್ಯಾನಿಲಯವು 12 (ಬಿ) ಮಾನ್ಯತೆ ನೀಡುವಂತೆ ಯುಜಿಗೆ ಪ್ರಸ್ತಾವ ಸಲ್ಲಿಸಿತ್ತು.ಇದಾದ ನಂತರ ಹಿಮಾಚಲ ಪ್ರದೇಶ ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಪ್ರೊ.ಡಿ.ಎಸ್.ರಾಥೋಡ್ ಅಧ್ಯಕ್ಷತೆಯ ಯುಜಿಸಿ ತಜ್ಞರ ಸಮಿತಿಯು ಜ. 26ರಂದು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಇಲ್ಲಿನ ಮೂಲಸೌಕರ್ಯ ಹಾಗೂ ಇತರೆ ಅವಶ್ಯಕತೆಗಳ ಪರಿಶೀಲನೆ ನಡೆಸಿ, ಸರ್ವಾನುಮತದ ಒಪ್ಪಿಗೆ ನೀಡಿತ್ತು.

ವಿ.ವಿ. ಕ್ಯಾಂಪಸ್, ಪ್ರತ್ಯೇಕ ವಿಜ್ಞಾನ ಬ್ಲಾಕ್, ಪ್ರಯೋಗಾಲಯ, ತರಗತಿ ಕೊಠಡಿ, ಸೆಮಿನಾರ್ ಹಾಲ್, ಆಡಳಿತ ವಿಭಾಗ, ಮಹಿಳೆ, ಪುರುಷರಿಗೆ ಪ್ರತ್ಯೇಕ ಹಾಸ್ಟೆಲ್, ಅತಿಥಿಗೃಹ, ಉದ್ಯಾನವನ ಹೊಂದಿರುವ ಕುರಿತು ಸಮಿತಿ ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ವಿ.ವಿ. ಕುಲ ಸಚಿವ ಶಿವಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸದ್ಯ, ವಿಶ್ವವಿದ್ಯಾನಿಲಯದಲ್ಲಿ 1230 ಸ್ನಾತಕೋತ್ತರ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಒಟ್ಟು 17 ಕಾಲೇಜುಗಳಲ್ಲಿ ಸ್ನಾತಕೋತ್ತರ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಿ.ವಿ. ಕಾಲೇಜು ಸೇರಿದಂತೆ ಎಲ್ಲ 88 ಸಂಯೋಜಿತ ಕಾಲೇಜುಗಳಿಂದ ಒಟ್ಟು 30877 ವಿದ್ಯಾರ್ಥಿಗಳು ಪದವಿ ಅಧ್ಯಯನ ನಡೆಸುತ್ತಿದ್ದಾರೆ