ತುಮಕೂರು: ನಗರದ ಅಮಾನಿಕೆರೆ ಅಭಿವೃದ್ಧಿ ಕಾಮಗಾರಿ ಡಿ. 30ರ ಒಳಗೆ ಪೂರ್ಣಗೊಳ್ಳಲಿದೆ ಎಂದು ಕಾನೂನು ಹಾಗೂ ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು.
ಅಮಾನಿಕೆರೆ ಕಾಮಗಾರಿಯನ್ನು ಸೋಮವಾರ ಪರಿಶೀಲಿಸಿ ಮಾತನಾಡಿದ ಅವರು ಡಿ. 15ರಿಂದ ಹೇಮಾವತಿ ನಾಲೆಯ ನೀರನ್ನು ಕೆರೆಗೆ ಹರಿಸಲಾಗುವುದು. ಜ. 26ರಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಕೆರೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದರು.
ಈ ಬಾರಿ ಯಾವುದೇ ಕಾರಣಕ್ಕೂ ತಡವಾಗಬಾರದು. ಸಮಯಕ್ಕೆ ಸರಿಯಾಗಿ ಕೆಲಸಗಳು ಪೂರ್ಣಗೊಳ್ಳಬೇಕು. ತುಮಕೂರು ಜನತೆಗೆ ಸುಂದರ ಅಮಾನಿಕೆರೆಯನ್ನು ಕೊಡುಗೆಯಾಗಿ ನೀಡುವುದು ಸರ್ಕಾರದ ಆಶಯಗಳಲ್ಲಿ ಒಂದು ಎಂದು ಹೇಳಿದರು.
ಮುಖ್ಯ ಎಂಜಿನಿಯರ್ ನೀಡಿದ್ದ ತಪ್ಪು ಮಾಹಿತಿಯಿಂದಾಗಿ ಕೆರೆ ಕಾಮಗಾರಿಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿದ್ದೆ. ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಅಗತ್ಯ ಮಾಹಿತಿ ಪಡೆದ ನಂತರ ನನ್ನ ಅಭಿಪ್ರಾಯ ಬದಲಾಗಿದೆ ಎಂದು ಸಂಸದ ಬಸವರಾಜ್ ಸ್ಪಷ್ಟಪಡಿಸಿದರು.
ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆ ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತೆರಳುವ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ವೈಷ್ಣೋದೇವಿ ದರ್ಶನ ಪಡೆದ ಬಳಿಕ ಪ್ರಚಾರಕ್ಕೆ ತೆರಳುವುದಾಗಿ ಈ ಹಿಂದೆ ಯಡಿಯೂಪ್ಪ ಹೇಳಿದ್ದರು. ಅದರಂತೆ ನಡೆದುಕೊಳ್ಳುತ್ತಾರೆ ಎಂದು ಸುರೇಶ್‌ಕುಮಾರ್ ತಿಳಿಸಿದರು.
ಶಾಸಕ ಎಸ್.ಶಿವಣ್ಣ, ಟೂಡಾ ಅಧ್ಯಕ್ಷ ಶ್ರೀಧರಮೂರ್ತಿ, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಟೂಡಾ ಆಯುಕ್ತ ಆದರ್ಶ್‌ಕುಮಾರ್ ಉಪಸ್ಥಿತರಿದ್ದರು.
No comments:
Post a Comment