ತುಮಕೂರು: . ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗವು ವಿ.ವಿ.ಗೆ 12 (ಬಿ) ಮಾನ್ಯತೆ ನೀಡಿದೆ. 8 ವರ್ಷ ಕಾಲದ ಕನಸು ಸಾಕಾರಗೊಂಡಿದೆ.<br/>
ಸ್ವಂತ ಕಟ್ಟಡ, ಪ್ರಾಧ್ಯಾಪಕ ವರ್ಗ, ಮೂಲಭೂತ ಸೌಲಭ್ಯಗಳ ಕೊರತೆ ಕಾರಣದಿಂದಾಗಿ 8 ವರ್ಷಗಳಿಂದಲೂ ಯುಜಿಸಿಯಿಂದ ಯಾವುದೇ ಅನುದಾನ ಪಡೆಯದೆ ಬಳಲುತ್ತಿದ್ದ ವಿಶ್ವವಿದ್ಯಾನಿಲಯಕ್ಕೆ ಇನ್ನು ಮುಂದೆ ಸಾಕಷ್ಟು ಅನುದಾನ ಹರಿದುಬರಲಿದೆ. ಯುಜಿಸಿ ಮಾನ್ಯತೆ ಇಲ್ಲದ ಕಾರಣಕ್ಕಾಗಿ ಪದವಿ, ಸ್ನಾತಕೋತ್ತರ ಪದವಿ ಪಡೆದ ಪದವೀಧರರು, ಇಲ್ಲಿನ ಪ್ರಾಧ್ಯಾಪಕ ವರ್ಗ ಇಷ್ಟು ವರ್ಷ ಕಾಲ ಒಂದು ರೀತಿ ಅನಾಥಪ್ರಜ್ಞೆಯಿಂದ ನರಳುತ್ತಿದ್ದರು.ಇದೀಗ 12 (ಬಿ) ಮಾನ್ಯತೆಗೆ ಪಾತ್ರವಾಗಿರುವುದರಿಂದ ಇನ್ನು ಮುಂದೆ ಕೋಟ್ಯಂತರ ರೂಪಾಯಿ ಕೇಂದ್ರಿಯ ಅನುದಾನ ವಿ.ವಿ.ಗೆ ಹರಿದುಬರಲಿದೆ. ಇಲ್ಲಿನ ಪ್ರಾಧ್ಯಾಪಕ ವರ್ಗ ಸಂಶೋಧನೆ, ಪ್ರಬಂಧ ಮಂಡನೆ, ಉನ್ನತ ಶಿಕ್ಷಣ ಪಡೆಯಲು ಸಾಕಷ್ಟು ಅವಕಾಶ ಸಿಗಲಿದೆ. ಅಲ್ಲದೆ ವಿಶ್ವವಿದ್ಯಾನಿಲಯವು ಅನೇಕ ಹೊಸ ಹೊಸ ಕೋರ್ಸ್ ಆರಂಭಿಸಲು ಅನುದಾನ ಪಡೆಯಬಹುದಾಗಿದೆ.ಸ್ವಂತ ಕಟ್ಟಡ, ಮೂಲಭೂತ ಸೌಕರ್ಯ ಇಲ್ಲ ಎಂಬ ಕಾರಣಕ್ಕಾಗಿ ಈ ಹಿಂದೆ ವಿಶ್ವವಿದ್ಯಾನಿಯದ ಧನ ಸಹಾಯ ಆಯೋಗವು ಮಾನ್ಯತೆ ನೀಡಲು ನಿರಾಕರಿಸಿತ್ತು. ಅಕ್ಟೋಬರ್ 2011ರಂದು ವಿಶ್ವವಿದ್ಯಾನಿಲಯವು 12 (ಬಿ) ಮಾನ್ಯತೆ ನೀಡುವಂತೆ ಯುಜಿಗೆ ಪ್ರಸ್ತಾವ ಸಲ್ಲಿಸಿತ್ತು.ಇದಾದ ನಂತರ ಹಿಮಾಚಲ ಪ್ರದೇಶ ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಪ್ರೊ.ಡಿ.ಎಸ್.ರಾಥೋಡ್ ಅಧ್ಯಕ್ಷತೆಯ ಯುಜಿಸಿ ತಜ್ಞರ ಸಮಿತಿಯು ಜ. 26ರಂದು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಇಲ್ಲಿನ ಮೂಲಸೌಕರ್ಯ ಹಾಗೂ ಇತರೆ ಅವಶ್ಯಕತೆಗಳ ಪರಿಶೀಲನೆ ನಡೆಸಿ, ಸರ್ವಾನುಮತದ ಒಪ್ಪಿಗೆ ನೀಡಿತ್ತು.
ವಿ.ವಿ. ಕ್ಯಾಂಪಸ್, ಪ್ರತ್ಯೇಕ ವಿಜ್ಞಾನ ಬ್ಲಾಕ್, ಪ್ರಯೋಗಾಲಯ, ತರಗತಿ ಕೊಠಡಿ, ಸೆಮಿನಾರ್ ಹಾಲ್, ಆಡಳಿತ ವಿಭಾಗ, ಮಹಿಳೆ, ಪುರುಷರಿಗೆ ಪ್ರತ್ಯೇಕ ಹಾಸ್ಟೆಲ್, ಅತಿಥಿಗೃಹ, ಉದ್ಯಾನವನ ಹೊಂದಿರುವ ಕುರಿತು ಸಮಿತಿ ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ವಿ.ವಿ. ಕುಲ ಸಚಿವ ಶಿವಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸದ್ಯ, ವಿಶ್ವವಿದ್ಯಾನಿಲಯದಲ್ಲಿ 1230 ಸ್ನಾತಕೋತ್ತರ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಒಟ್ಟು 17 ಕಾಲೇಜುಗಳಲ್ಲಿ ಸ್ನಾತಕೋತ್ತರ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಿ.ವಿ. ಕಾಲೇಜು ಸೇರಿದಂತೆ ಎಲ್ಲ 88 ಸಂಯೋಜಿತ ಕಾಲೇಜುಗಳಿಂದ ಒಟ್ಟು 30877 ವಿದ್ಯಾರ್ಥಿಗಳು ಪದವಿ ಅಧ್ಯಯನ ನಡೆಸುತ್ತಿದ್ದಾರೆ
No comments:
Post a Comment