Thursday, 17 May 2012

ಪಾರಂಪರಿಕ ದಾಸಪ್ಪ ಸಂಪ್ರದಾಯ


ಪ್ರತಿ ಮನೆ ಮುಂದೆ ನಿಂತು ಶ್ರೀಮದ್ ರಮಾರಮಣ ಗೋವಿಂದಾ... ಗೋವಿಂದಾ... ಮೂಡಲಗಿರಿಯವನೇ ಸ್ವಾಮಿ ನಿನ್ನ ಪಾದಕ್ಕೆ ಗೋವಿಂದಾ... ಎಂದು ವಕ್ಕಲು ಮನೆಯವರಲ್ಲಿ ಧವಸ, ಧಾನ್ಯ ಪಡೆದು ತಿಮ್ಮಪ್ಪನನ್ನು ಸ್ತುತಿಸುತ್ತಾ ಬದುಕು ನಡೆಸುತ್ತಾರೆ ದಾಸಪ್ಪಗಳು. ದಾಸಪ್ಪ ಸಂಪ್ರದಾಯವಿಲ್ಲದ ಊರಿಲ್ಲ. ಶ್ರಾವಣ ಮಾಸ ಬಂದರೆ ಭಿಕ್ಷೆಗೆ ಪುರುಸೊತ್ತಿಲ್ಲ.

ಶಂಕು, ಜಾಗಟೆ ನಾದ ಕಿವಿಗೆ ಹಿತವನ್ನುಂಟು ಮಾಡುತ್ತದೆ. ಬಿಳಿ ಕೆಂಪು ಬಟ್ಟೆಯ ಪೇಟ, ನಿಲುವಂಗಿ, ಕಚ್ಚೆ ಧರಿಸಿ, ಕಂಕುಳಿಗೆ ಬುವನಾಸಿ ಹಾಕಿ, ಮಧ್ಯಕೆಂಪು ಆ ಕಡೆ ಈ ಕಡೆ ಬಿಳಿಯ ಗೂಟುನಾಮ ಧರಿಸಿದವರೆ ದಾಸಪ್ಪಗಳು.

ತಿರುಪತಿ ತಿಮ್ಮಪ್ಪ ಆರಾಧ್ಯ ದೈವ. ತಿಮ್ಮಪ್ಪನ ಅವತಾರಗಳಲ್ಲಿ ನಂಬಿಕೆ ಹೆಚ್ಚು. ಜೋಳಿಗೆಯಲ್ಲಿ ಪೆರು ಮಾಳು, ಅರುಗೆ, ಬಾಂಕಿ (ಶಂಖ), ಜಾಗಟೆ, ಪಂಚಪಾತ್ರೆ, ಗಂಟೆ, ಧೂಪುಂಡಿಗೆ, ಮಂಗಳಾರತಿ ತಟ್ಟೆ, ನಾಮದ ಡಬ್ಬಿ ಇಟ್ಟುಕೊಂಡು ದಾಸಪ್ಪ ವೃತ್ತಿ ಪಾಲಿಸುತ್ತಾ ಗೋವಿಂದಾ... ಗೋವಿಂದಾ.... ಎಂದು ಸ್ಮರಣೆ ಮಾಡುತ್ತಾರೆ.

ಸ್ನಾನ ಮಾಡಿ, ವಸ್ತ್ರ ತೊಳೆದು, ಬ್ಯಾಟೆ ಎಲೆ, ಹೂವಿಂದ ಪೂಜಿಸಿ, ಜಾಗಟೆ ಬಡಿದು ಬಾಂಕಿ (ಶಂಕು) ಊದಿ ತಿಮ್ಮಪ್ಪನ ವಕ್ಕಲು ಮನೆ ಯಲ್ಲಿ ಸ್ತುತಿ ಮಾಡುವುದನ್ನು ಪ್ರತಿ ಶನಿವಾರ, ಶ್ರಾವಣ ಮಾಸ, ಏಕಾದಶಿ, ಕಾರ್ತೀಕ ಮಾಸ, ನಾಮಕರಣ, ಅರಿಗೆ ಆಡಿಸುವುದು, ಸೂತಕ ತೆಗೆಯುವುದು, ಯಾರಾದರು ಸತ್ತಾಗ ಆರಾಧನೆ ಸಂದರ್ಭದಲ್ಲಿ ದಾಸಪ್ಪನನ್ನು ಕರೆಸುತ್ತಾರೆ. ಈ ರೀತಿ 200 ವರ್ಷಗಳಿಂದ ತಮ್ಮ ತಾತ ಬಣ್ಣದ ವೆಂಕಟಪ್ಪ, ತಂದೆ ಬಣ್ಣದ ಹನುಮಯ್ಯ ಮಾಡಿರುವ ಕೆಲಸವನ್ನು ತಾವು ಅನುಸರಿಸುತ್ತಿ ರುವುದಾಗಿ ಬಣ್ಣದ ವೆಂಕಟೇಶ್ ಹೇಳುತ್ತಾರೆ.
ಧೀಕ್ಷೆ ನೀಡುವುದು...

ದಾಸಪ್ಪ ಇತರ ದಾಸಯ್ಯಗಳ ಸಮ್ಮುಖ ತನ್ನ ಮಕ್ಕಳಿಗೆ ಧೀಕ್ಷೆ ನೀಡುತ್ತಾನೆ. ತಗಡಿನ ಮೇಲೆ ಬರೆದ ಶಂಕ ಮತ್ತು ಚಕ್ರ ಮುದ್ರೆಯ ಬೆಂಕಿಲಿ ಕಾಯಿಸಿ ಧೀಕ್ಷೆ ಹೊಂದುವ ವಟುವಿನ ಎರಡು ತೋಳಿಗೆ ತಿರುಮಂತ್ರ ಹೇಳುತ್ತಾ ಮುದ್ರೆ ಹಾಕಲಾಗುತ್ತದೆ. ಅಂದು ಹಿರಿಯರು ಧೀಕ್ಷೆ ಪಡೆದ ವಟುವಿಗೆ ಎಂಜಲು ತಿನ್ನದಿರುವುದು, ಬಾಳೆ ಎಲೆಯಲ್ಲಿ ಊಟ ಮಾಡುವುದು, ಕಂಚಿನ ತಣಿಗೇಲಿ ಊಟ ನಿಶಿದ್ಧ, ಹೆಚ್ಚಿನ ಆಸೆ ಹೊಂದದೆ ಭಿಕ್ಷೆ ಮಾಡುವುದು, ಕೊಟ್ಟದ್ದನ್ನು ತಿಮ್ಮಪ್ಪನಿಗೆ ಅರ್ಪಿತ ಎಂದು ಸ್ವೀಕರಿಸುವುದನ್ನು ಕಲಿಸುತ್ತಾರೆ ಎನ್ನುತ್ತಾರೆ ದಾಸಪ್ಪ ಜಿ.ಪಿ.ರಾಮಣ್ಣ.

ದಾಸಪ್ಪಗಳು ಮತ್ತು ಭೈರವನ ಜೋಗಪ್ಪಗಳು ದ್ವೇಷಿಸುವುದಿಲ್ಲ. ಧೀಕ್ಷೆ ಕೊಡುವಾಗ ಮದ್ಯಪಾನ ಪ್ರಿಯರಾದ ಇಬ್ಬರೂ ಹಾಜರಿರುತ್ತಾರೆ. ಮದುವೆ ವಿಷಯದಲ್ಲಿ ಹೆಣ್ಣು ತರುವ, ಕೊಡುವ ವಿಷಯದಲ್ಲಿ ಸಂಬಂಧಿಕರಾಗುತ್ತಾರೆ.

ಒಂದೇ ಕುಲದೈವದ ಮನೆಯಲ್ಲಿ ದಾಸಪ್ಪ ಮತ್ತು ಜೋಗಪ್ಪ ಸಂಬಂಧ ಬೆಳೆಸುವುದಿಲ್ಲ. ಗುಬ್ಬಿ ತಾಲ್ಲೂಕಿನ ಕೊಪ್ಪ, ಕೋಟೆ, ಹೊಸಕೆರೆ, ಗುಬ್ಬಿ, ಚೆನ್ನಶೆಟ್ಟಿಹಳ್ಳಿ, ಕಲ್ಲೂರು, ಸಿ.ಎಸ್.ಪುರ, ನಿಟ್ಟೂರಲ್ಲಿ ಹೆಚ್ಚುಕಾಣುವ ಇವರು ಒಂದು ಜಾತಿಗೆ ಸೀಮಿತವಲ್ಲ. ಗೊಲ್ಲ, ಅಂಬಿಗ, ಬೇಡ, ಕಬ್ಬೇರು, ವಕ್ಕಲಿಗ, ತಿಗಳ, ಉಪ್ಪಾರ ಇತರ ಕುಲಗಳಲ್ಲಿ ಸಿಗುತ್ತಾರೆ. ಅವರನ್ನು ಶೂದ್ರ ದಾಸರು ಅಥವಾ ಶೂದ್ರ ಪುರೋಹಿತರೆಂದು ಸಂಶೋಧಕರು ಕರೆಯುತ್ತಾರೆ.

1 comment: