Thursday, 6 June 2013

ಪ್ರಥಮ ಮಹಿಳಾ ಜೈಲು ಕಾರ್ಯಾರಂಭ

ತುಮಕೂರು: ರಾಜ್ಯದ ಪ್ರಥಮ ಮಹಿಳಾ ಕಾರಾಗೃಹ ನಗರದಲ್ಲಿ ಆರಂಭವಾಗಿದೆ. ಶಿಕ್ಷೆಗೆ ಒಳಗಾಗಿರುವ ಮಹಿಳಾ ಕೈದಿಗಳನ್ನು ರಾಜ್ಯದ ಇತರೆ ಜಿಲ್ಲೆಗಳಿಂದ ಇಲ್ಲಿಗೆ ಸ್ಥಳಾಂತರಿಸಲಾಗುತ್ತಿದೆ. ಈಗಾಗಲೇ ಮೈಸೂರು ಕೇಂದ್ರ ಕಾರಾಗೃಹದಿಂದ 15 ಮಂದಿ ಮಹಿಳಾ ಕೈದಿಗಳನ್ನು ಸ್ಥಳಾಂತರ ಮಾಡಲಾಗಿದೆ.
ಕಳೆದ ವರ್ಷವೇ ಮಹಿಳಾ ಕಾರಾಗೃಹ ಆರಂಭಿಸುವುದಾಗಿ ಘೋಷಿಸಲಾಗಿತ್ತು. ಆದರೆ ಕಟ್ಟಡ ನವೀಕರಣ ಕಾಮಗಾರಿ ನಿಗದಿತ ಸಮಯಕ್ಕೆ ಮುಗಿಯದ ಕಾರಣ ತಡವಾಗಿ ಮಹಿಳಾ ಜೈಲು ಆರಂಭಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ನಿಗದಿತ ಸಮಯಕ್ಕೆ ಕಾಮಗಾರಿ ಮುಗಿಸಿ ಇಲಾಖೆಗೆ ಹಸ್ತಾಂತರ ಮಾಡಿರಲಿಲ್ಲ.
ಅಲ್ಲದೆ ವಿಧಾನಸಭೆ ಚುನಾವಣೆ ಸಮೀಪಿಸಿದ್ದರಿಂದ ನೂತನ ಕಾರಾಗೃಹ ಪ್ರಾರಂಭವಾಗಿರಲಿಲ್ಲ. ಮಹಿಳಾ ಕಾರಾಗೃಹವನ್ನು ಹೊಸ ಸರ್ಕಾರದ ಮಂತ್ರಿಗಳು ಬಂದ ನಂತರ ಜೂನ್‌ನಲ್ಲಿ ಅಧಿಕೃತವಾಗಿ ಉದ್ಘಾಟನೆಯಾಗಲಿದೆ.
ನಗರದ ಕುಣಿಗಲ್ ರಸ್ತೆಯಲ್ಲಿದ್ದ ಉಪ ಕಾರಾಗೃಹದ ಆವರಣದಲ್ಲಿಯೇ ಮಹಿಳಾ ಜೈಲು ಆರಂಭವಾಗುತ್ತಿದೆ. ಆದರೆ ಮಹಿಳೆಯರಿಗೆ ಪ್ರತ್ಯೇಕ ಕಟ್ಟಡವನ್ನು ಪಡೆಯಲಾಗಿದೆ. ಸುಮಾರು ರೂ. 86 ಲಕ್ಷ ವೆಚ್ಚದಲ್ಲಿ ಕಟ್ಟಡ ನವೀಕರಣ ಮಾಡಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಸ್ನಾನದ ಕೊಠಡಿ, ಶೌಚಗೃಹ ನಿರ್ಮಿಸಲಾಗಿದೆ.
ಸುಮಾರು 250ರಿಂದ 300 ಮಂದಿ ಮಹಿಳಾ ಕೈದಿಗಳಿಗೆ ಅವಕಾಶವಿದ್ದು, ಎಲ್ಲ ಕೈದಿಗಳಿಗೂ ಹೊಸ ಹಾಸಿಗೆ, ಹೊದಿಕೆ, ಬೆಡ್‌ಶೀಟ್, ತಟ್ಟೆ, ಚಂಬು ನೀಡಲಾಗುತ್ತಿದೆ. ಪ್ರತಿಯೊಂದು ಕೊಠಡಿಗೆ ಫ್ಯಾನ್ ಮತ್ತು ಕಲರ್ ಟಿವಿ ಅಳವಡಿಸಲಾಗುತ್ತಿದೆ. ಇಲಾಖೆಯಿಂದ ನೇರವಾಗಿ ಟಿವಿ ಸರಬರಾಜು ಮಾಡಲಾಗುತ್ತಿದೆ. ಪ್ರತಿ ಕೊಠಡಿ ವಿಶಾಲವಾಗಿದ್ದು, 15ರಿಂದ 20 ಮಂದಿ ಇರಬಹುದು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲೆಯ ವಿಚಾರಣೆ ಹಂತದಲ್ಲಿದ್ದ 13 ಮಹಿಳಾ ಕೈದಿಗಳು ಇಲ್ಲಿ ಇದ್ದರು. ಮೈಸೂರಿನಿಂದ 15 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಉಳಿದವರನ್ನು ಹಂತಹಂತವಾಗಿ ಸ್ಥಳಾಂತರ ಮಾಡಲಾಗುತ್ತದೆ. ಈಗಾಗಲೇ ಇತರೆ ಜಿಲ್ಲೆಗಳ ಜೈಲಿನಲ್ಲಿ ಇರುವವರಿಗಿಂತ, ಮುಂದೆ ಶಿಕ್ಷೆಗೆ ಒಳಗಾಗುವ ಕೈದಿಗಳನ್ನು ಇಲ್ಲಿಗೆ ಸ್ಥಳಾಂತರಿಸಲು ಅಧಿಕಾರಿಗಳು ಆದ್ಯತೆ ನೀಡಿದ್ದಾರೆ ಎನ್ನಲಾಗಿದೆ. 

ಈಗಾಗಲೇ ಇರುವ ಉಪ ಕಾರಾಗೃಹಕ್ಕೂ ಮಹಿಳಾ ಕಾರಾಗೃಹಕ್ಕೂ ಆಡಳಿತಾತ್ಮಕವಾಗಿ ಯಾವುದೇ ಸಂಬಂಧ ಇರುವುದಿಲ್ಲ. ಇಲ್ಲಿಗೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ಪ್ರತ್ಯೇಕ ಕಾರಾಗೃಹ ಅಧೀಕ್ಷಕರು ಆಡಳಿತ ನೋಡಿಕೊಳ್ಳುತ್ತಾರೆ.
ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಒತ್ತು ಕೊಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಹೊಸ ಕಾರಾಗೃಹಕ್ಕೆ ಗ್ಯಾಸ್ ಸಂಪರ್ಕ ಸಿಕ್ಕಿರಲಿಲ್ಲ. ಈಗ ಸಂಪರ್ಕ ಕಲ್ಪಿಸಲಾಗುತ್ತಿದೆ. ಅಡುಗೆ ಮನೆ ಸಾಮಗ್ರಿ ಸೇರಿದಂತೆ ಎಲ್ಲವನ್ನೂ ಹೊಸದಾಗಿ ತರಲಾಗುತ್ತಿದೆ. ಈ ವಾರದಲ್ಲಿ ಗುತ್ತಿಗೆ ಆಧಾರದಲ್ಲಿ ಅಡುಗೆಯವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಅಲ್ಲಿಯವರೆಗೆ ಇಲ್ಲ ಕೈದಿಗಳಿಗೂ ಹೊರಗೆ ಮೆಸ್‌ನಿಂದ ಊಟ ತರಿಸಲಾಗುತ್ತಿದೆ. ಸಾಮಾನ್ಯ ಜೈಲುಗಳಿಗಿಂತ ಮಹಿಳಾ ಕೈದಿಗಳಿಗೆ ಹೆಚ್ಚು ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಮಹಿಳಾ ಕಾರಾಗೃಹ ಅಧೀಕ್ಷಕ ಭಜಂತ್ರಿ ` ತಿಳಿಸಿದರು.

No comments:

Post a Comment