Saturday, 31 December 2011

ಬೆಟ್ಟದಷ್ಟು ದುಃಖ, ಹಿಡಿಯಷ್ಟು ಸಂತಸ ಕೊಟ್ಟ ವರ್ಷ


ತುಮಕೂರು ಮಾನಿಕೆರೆಗೆ ನೀರು ಬಂದ ಕ್ಷಣ.
ತುಮಕೂರು: ಹೊಸ ವರ್ಷ ಬಾಗಿಲಿಗೆ ಬಂದು ನಿಂತಿದೆ. ಹೊಸ ಹೆಜ್ಜೆ ಇಡುವ ಮುನ್ನ ನಡೆದು ಬಂದ ವರ್ಷದ ಕಡೆಗೆ ನೋಡಿದರೆ ನಿರಾಸೆಯೇ ಕಾಣುತ್ತದೆ. ಒಂದೇ ಒಂದು ಭರವಸೆಯ ಕೋಲ್ಮಿಂಚು ಕೂಡ ಸುಳಿದು ಹೋಗಿಲ್ಲ.

ದಕ್ಷ ಆಡಳಿತದ ಒಂದು ಝಲಕ್ ಕೂಡ ಕಾಣ ಸಿಗುವುದಿಲ್ಲ. ಇಡೀ ವರ್ಷ ರೈತರು, ವಿದ್ಯಾರ್ಥಿಗಳು, ಕಾರ್ಮಿಕರು, ಅಸಂಘಟಿತ ಕಾರ್ಮಿಕರ ಪ್ರತಿಭಟನೆಗಳ ಸರಮಾಲೆಯೇ ಕಾಣಸಿಗುತ್ತದೆಯಾದರೂ ಆ ಹೋರಾಟವನ್ನು ತಾರ್ಕಿಕ ಮಟ್ಟಕ್ಕೆ ಕೊಂಡೂಯ್ಯುವ ಒಬ್ಬ ನಾಯಕ ಉದಯಿಸಲಿಲ್ಲ.

ಜಿಲ್ಲೆಯಲ್ಲಿ ಇಡೀ ವರ್ಷ ಅಪಘಾತಗಳ ಸರಮಾಲೆ, ಅಪ್ಪಳಿಸಿದ ಬರ, ರೈತರ ಸರಣಿ ಆತ್ಮಹತ್ಯೆ... ಹೀಗೆ ಸಂತಸಕ್ಕಿಂತ ದುಃಖದ ಸಂಗತಿಗಳೇ ಹೆಚ್ಚು ರಾಚುತ್ತವೆ. ಅಭಿವೃದ್ಧಿ ದೃಷ್ಟಿಯಲ್ಲಿ ಹೆಗ್ಗುರುತು ಮೂಡಿಸುವಂಥ ಕೆಲಸ ಕಾಣುತ್ತಿಲ್ಲ. ಆದರೆ ದಶಕಗಳ ರೈತರ ಕನಸಾಗಿದ್ದ ಗೂಳೂರು- ಹೆಬ್ಬೂರು ಏತ ನೀರಾವರಿ, ನಾಗವಲ್ಲಿ, ತಿಪಟೂರು, ಹೊನ್ನವಳ್ಳಿ, ತುಮಕೂರು ಅಮಾನಿಕೆರೆ, ಹೆಬ್ಬಾಕ ಕೆರೆಗೆ ಹೇಮಾವತಿ ನೀರು ಹರಿಸಿದ್ದು ಮಾತ್ರವೇ ಈ ವರ್ಷದ ಮಟ್ಟಿಗೆ ಸಮಾಧಾನದ ಸಂಗತಿ. ಹೀಗಾಗಿ ಈ ವರ್ಷವನ್ನು ಜಿಲ್ಲೆಯ `ನೀರಾವರಿ ವರ್ಷ` ಎಂದೇ ಹೇಳಬಹುದು.

ರಾಜಧಾನಿಯ `ಭವಿಷ್ಯದ ಉಪ ನಗರಿ` ನಿರೀಕ್ಷೆ ಹೊತ್ತಿದ್ದರೂ ನಗರದಲ್ಲಿ ಹೇಳಿಕೊಳ್ಳುವಂಥ ಕೆಲಸ ಆಗಲಿಲ್ಲ. ಒಂದೇ ವರ್ಷದಲ್ಲಿ ನಾಲ್ವರು ಉಸ್ತುವಾರಿ ಸಚಿವರನ್ನು ಕಾಣಬೇಕಾಯಿತು.    ಎಸ್.ಸುರೇಶ್‌ಕುಮಾರ್, ಶೋಭಾ ಕರಂದ್ಲಾಜೆ, ಸೋಮಣ್ಣ, ಮುರುಗೇಶ್ ನಿರಾಣಿ ಉಸ್ತುವಾರಿ ಸಚಿವರಾಗಿ ಬಂದರೂ `ರಾಜ ಯಾರೇ ಆದರೂ ರಾಗಿ ಬೀಸೋದು ತಪ್ಪಲ್ಲ` ಎಂಬ ಸ್ಥಿತಿ.

ಉಸ್ತುವಾರಿ ಸಚಿವರಾಗಿ ಬಂದವರಲ್ಲಿ, ಎಸ್.ಸುರೇಶ್‌ಕುಮಾರ್ ಒಂದಿಷ್ಟು ಭರವಸೆ ಮೂಡಿಸಿದರಾದರೂ ಬಂದಷ್ಟೇ ವೇಗದಲ್ಲಿ ವಾಪಸಾದ ಶೋಭಾ ಕರಂದ್ಲಾಜೆ, ಚಿಕ್ಕನಾಯಕನಹಳ್ಳಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪಕ್ಕೆ ಸಿಲುಕಿದ ಸೋಮಣ್ಣ, ನಂತರ ಬಂದ ಮುರುಗೇಶ್ ನಿರಾಣಿ ಜನರಿಗೆ ಆಸರೆಆಗಲಿಲ್ಲ. ಸೋಮಣ್ಣ ನಗರಕ್ಕೆ ಮುಖ ಹಾಕಲಿಲ್ಲ, ನಿರಾಣಿ ಒಮ್ಮೆ ಸಭೆ ನಡೆಸಿ `ತುಮಕೂರಿಗೆ ನಮೋ` ಎಂದವರು ಮತ್ತೇ ಕಂಡಿದ್ದು ವರ್ಷದ ಕೊನೆಯಲ್ಲಿ.

ಜಿಲ್ಲೆಗೆ ಬರ ಅಪ್ಪಳಿಸಿದೆ ಎಂದು ಸರ್ಕಾರವೇ ಘೋಷಿಸಿದರೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ರೈತರ ಕಷ್ಟ ಅರಿಯದಂಥ ದುಃಸ್ಥಿತಿ. ಪ್ರಗತಿಪರರ ಮೌನ, ಮಾಧ್ಯಮಗಳ ವೈಫಲ್ಯ, ಸಂಘಟನೆಗಳು ವೈಯಕ್ತಿಕ ಹಿತಾಸಕ್ತಿಗೆ ಹೆಚ್ಚು ಒತ್ತು ನೀಡಿದ ಕಾರಣ ಜಿಲ್ಲೆ ಒಂದರ್ಥದಲ್ಲಿ `ಸ್ಪಂದನೆ` ಕಳೆದುಕೊಂಡಂತೆ ಕಂಡುಬಂತು.

ಜಿಲ್ಲೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಸಂಸದ ಜಿ.ಎಸ್.ಬಸವರಾಜು ಮಾಧ್ಯಮಗಳ ಮೂಲಕ ಅವಲತ್ತುಕೊಂಡರು. ಆರೋಪ ಮಾಡಿದ ಒಬ್ಬ ಅಧಿಕಾರಿ ಕೂಡ ಜಿಲ್ಲೆ ಬಿಟ್ಟು ಕದಲಿಲ್ಲ. `ಎತ್ತು ಏರಿಗೆ ಎಳೆದರೆ ಎಮ್ಮೆ ನೀರಿಗೆ ಎಳೆಯಿತು` ಎಂಬ ಗಾದೆಯಂತೆ ಜಿಲ್ಲೆಗೆ ಏನು ಬೇಕು, ಅಭಿವೃದ್ಧಿಯ ಕುರಿತ ಸಮಗ್ರ ನೋಟವನ್ನೇ ಇಲ್ಲಿನ ಯಾವ ಶಾಸಕರು ಹರಿಸಲಿಲ್ಲ. ಪರಿಣಾಮ ಉತ್ತರ ಕರ್ನಾಟಕ ಭಾಗಕ್ಕಿಂತ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಎಂಬ ಅಪಖ್ಯಾತಿಗೆ ಜಿಲ್ಲೆ ಒಳಗಾಗಬೇಕಾಯಿತು.

ರಾಜಕಾರಣದ ಏಳು ಬೀಳು ಜಿಲ್ಲೆಗೆ ಸಿಕ್ಕಿದ್ದ ಒಂದು ಮಂತ್ರಿ ಸ್ಥಾನ ಕಿತ್ತುಕೊಂಡಿತು. ಪಾವಗಡ ಶಾಸಕ ವೆಂಕಟರಮಣಪ್ಪ ಸಿಕ್ಕ ಸಚಿವ ಸ್ಥಾನ ಕಳೆದುಕೊಂಡರು. ಮತ್ತೊಬ್ಬರಿಗೆ ಸಚಿವ ಸ್ಥಾನ ಸಿಗಬೇಕೆಂಬ ಕನಸು ನನಸಾಗಲಿಲ್ಲ.


ತುಮಕೂರು ನಗರಸಭೆಯು ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಸಂತಸ ತಂದ ವರ್ಷ ಇದಾದರೂ ಅಷ್ಟೇ ವೇಗದಲ್ಲಿ ನಗರಸಭೆಗೆ ಹಿಂಬಡ್ತಿಯಾಗಿ ನಿರಾಸೆ ಮೂಡಿಸಿದೆ. ವರ್ಷದಲ್ಲಿ ಮೂವರು ಆಯುಕ್ತರನ್ನು ಕಂಡರೂ ಆಡಳಿತದಲ್ಲಿ ಮಾತ್ರ ಸುಧಾರಣೆ ಕಾಣಲಿಲ್ಲ. ಅಧ್ಯಕ್ಷೆ ಯಶೋಧಾಗಂಗಪ್ಪ ಕೂಡ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗ ಕಂಡುಕೊಳ್ಳಲಿಲ್ಲ. ಶಾಸಕರು, ಸಂಸದರ ಅಸಹಕಾರ `ರಾಜಕೀಯ`ಕ್ಕೆ ಶೋಭೆ ತಂದುಕೊಡಲಿಲ್ಲ.

ನಗರ ಘನತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಯಲಿಲ್ಲ. ಎರಡನೇ ಹಂತದ ಹೇಮಾವತಿ ನೀರು ಬರುವ ಕುತೂಹಲಕ್ಕೆ ತಣ್ಣೀರೆರಚಿದ ವರ್ಷ. ವರ್ಷದಲ್ಲಿ ಒಮ್ಮೆಯೂ ಪ್ರಗತಿ ಪರಿಶೀಲನಾ ಸಭೆ ನಡೆಸದೆ ದಾಖಲೆ ಮಾಡಿದ ಶಾಸಕ ಎಸ್.ಶಿವಣ್ಣ, ಉಸ್ತುವಾರಿ ಸಚಿವ ನಿರಾಣಿ ಮೊದಲ ಸಭೆಯಲ್ಲೆ ತೋಳೇರಿಸಿದ ಶಾಸಕರಾದ ಶ್ರೀನಿವಾಸ್, ಸುರೇಶ್‌ಗೌಡ, ವೆಂಕಟರಮಣಪ್ಪ. ಸರಿಯಾಗದ ಬಿ.ಎಚ್.ರಸ್ತೆ, ಕಗ್ಗಂಟಾಗಿಯೇ ಉಳಿದ, ತುಮಕೂರು ವಿ.ವಿ.ಗೆ ಭೂಮಿ, ರೈತರ 3.5 ಸಾವಿರ ಎಕರೆ  ಸ್ವಾಧೀನಪಡಿಸಿಕೊಂಡರೂ ಬಾರದ ಕೈಗಾರಿಕೆಗಳು, ಸಿಗದ ಕೆಲಸ, ದುರಸ್ತಿಯಾಗದ ಜಿಲ್ಲೆಯ ರಸ್ತೆಗಳು... ಇಂಥ ಹಣೆಪಟ್ಟಿ ಈ ವರ್ಷಕ್ಕಿದೆ.

ಕಳಪೆ ಕಾಮಗಾರಿ, ಮಹಿಳೆಯರು ನಾಪತ್ತೆ, ಅಪಘಾತ, ಸರಣಿ ರೈತರ ಆತ್ಮಹತ್ಯೆಗಳೇ ಈ ವರ್ಷ ಹೆಚ್ಚು. ಅಲ್ಲದೇ ಗ್ರಾಮೀಣಾಭಿವೃದ್ಧಿ ಕಂಡು ಕೇಳಯರಿದಷ್ಟು ಭ್ರಷ್ಟಾಚಾರಗಳಿಗೂ ಈ ವರ್ಷ ದಾಖಲೆ ಬರೆಯಿತು. ಸರ್ಕಾರದ ಯಾವ ಯೋಜನೆಗಳು ರೈತರಿಗೆ, ಬಡವರಿಗೆ ತಲುಪಿಸಲಾಗದ ವರ್ಷ ಇದಾಗಿದ್ದು ವಿಪರ್ಯಾಸ. ಗ್ರಾಮೀಣ ಉದ್ಯೋಗ ಖಾತರಿ, ಸಂಪೂರ್ಣ ಸ್ವಚ್ಛತಾ ನೈರ್ಮಲ್ಯ ಯೋಜನೆ, ಇಂದಿರಾ, ಬಸವ ವಸತಿ ಯೋಜನೆ ಯಾವ ಕಡೆ ನೋಡಿದರೂ ನಿರಾಸೆಯೇ ಕಾಣುತ್ತಿದೆ.

No comments:

Post a Comment