Tuesday 22 November 2011

ಸರ್ಕಾರಿ ಶಾಲೆಗೆ ಜೀವ ತಂದ ಶಿಕ್ಷಕ

ಈಗ ಸರ್ಕಾರಿ ಶಾಲೆ ಮುಚ್ಚುವ ಸುದ್ದಿಯದೇ ಚರ್ಚೆ. ಆದರೆ ಚಿಕ್ಕನಾಯಕನಹಳ್ಳಿ ಸಮೀಪದ ಗೊಲ್ಲರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಮಾಡಿದ ಪವಾಡ ಮುಚ್ಚುವ ಶಾಲೆ ನಳನಳಿಸುವಂಥಾಗಿದೆ. ಸರ್ಕಾರಿ ಶಾಲೆಯಲ್ಲಿ ಇಂಥ ಶಿಕ್ಷಕರಿದ್ದಿದ್ದರೆ ಇಂದು ಶಾಲೆಗಳನ್ನು ಮುಚ್ಚುವ ಮಾತುಗಳೇ ಬರುತ್ತಿರಲಿಲ್ಲವೇನೋ?

50 ವರ್ಷಗಳ ಹಿಂದೆ ಈ ಹಳ್ಳಿಯಲ್ಲಿ ಮಾನವ ಶ್ರಮ ಬಳಸಿ ಗಣಿಗಾರಿಕೆ ನಡೆಸುತ್ತಿದ್ದಾಗ ಕೆಲವು ಕುಟುಂಬಗಳು ನೆಲೆ ನಿಂತವು. ಈಗ ಇದು 70 ಮನೆಗಳ ಸಣ್ಣ ಊರು. ಇಲ್ಲಿ ಮಕ್ಕಳಿದ್ದರೂ ಶಾಲೆಗೆ  ಬರುತ್ತಿರ ಲಿಲ್ಲ. ಪೋಷಕರು ಮಕ್ಕಳ ಶಿಕ್ಷಣಕ್ಕೆ ಗಮನ ಕೊಡುತ್ತಿರಲಿಲ್ಲ.  ಮಕ್ಕಳಿಲ್ಲ ಎಂದು ಇನ್ನೇನು ಮುಚ್ಚುವ ಹಂತ ದಲ್ಲಿದ್ದ ಈ ಪ್ರಾಥಮಿಕ ಶಾಲೆಗೆ 1995ರಲ್ಲಿ ಶಿಕ್ಷಕರಾಗಿ ಶಿವಶಂಕರ್ ಬಂದರು.

ಶಿವಶಂಕರ್ ಈ ಶಾಲೆಗೆ ಬಂದಾಗ ಮುರಿದುಬಿದ್ದ ಶಾಲಾಕಟ್ಟಡ, ಮಳೆ ಬಂದರೆ ಆಶ್ರಯಕ್ಕೂ ಪರದಾಡು ವಂತಹ ಚೋಪಡಿ. ಕಪ್ಪು ಹಲಗೆ ಯಾಗಲಿ, ಖುರ್ಚಿ, ಟೇಬಲ್‌ಗಳಾಗಲಿ ಒಂದೂ ಇರಲಿಲ್ಲ.  ಶಾಲಾ ಮಾರ್ಗದಲ್ಲಿ ಬಂದರೆ ಗಣಿ ದೂಳಿನ ಸ್ನಾನ. ಶಾಲೆಯಲ್ಲಿ ಕೇವಲ 6 ಮಕ್ಕಳು! ಅರ್ಧದಲ್ಲೇ ಶಾಲೆ ಬಿಟ್ಟ ಮಕ್ಕಳೇ ಹೆಚ್ಚು.

ತಮಿಳು ಮಾತೃಭಾಷೆಯ ಈ ಮಕ್ಕಳಿಗೆ ಕನ್ನಡ ಕಲಿಸುವುದಿರಲಿ ಶಾಲೆಗೆ ಕರೆತರುವುದೇ ಕಷ್ಟವಾಗಿತ್ತು. ಪೋಷಕರಿಗೆ ಶಾಲಾ ಶಿಕ್ಷಕರ ಅರಿವು ಮೂಡಿಸಲು ಹೋದರೆ ಇವರ ಮಾತುಗಳನ್ನೇ ಕೇಳುತ್ತಿರಲಿಲ್ಲ. ಆದರೆ ಹತ್ತು ವರ್ಷದ ಬಳಿಕ ಶಾಲೆಯ ಪರಿಸರವೇ ಬದಲಾಯಿತು. ಇದಕ್ಕೆ ಕಾರಣ ಈ ಶಿಕ್ಷಕ.

ಸರ್ವ ಶಿಕ್ಷಣ ಅಭಿಯಾನದಲ್ಲಿ ಶಾಲೆಗೆ ಉತ್ತಮ ಕಟ್ಟಡ ಬಂದಿದೆ. ಪೀಟೋಪಕರಣ, ಪಾಠೋಪಕರಣದ ವ್ಯವಸ್ಥೆ ಇದೆ. ಮಕ್ಕಳಲ್ಲಿ ಶಿಸ್ತು ಇದೆ. ಯಾವ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದರೂ ಈಗ ಅದೇ ಪೋಷಕರು ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದಾರೆ.

ಶಾಲೆಯಲ್ಲಿ ಆಕರ್ಷಕ  ಕೈತೋಟ, ನೀರಿನ ವ್ಯವಸ್ಥೆ , ಗ್ರಂಥಾಲಯ, ವಿಶಾಲವಾದ ಆಟದ ಮೈದಾನ, ಪ್ರಯೋಗಶಾಲೆ, ಕಂಪ್ಯೂಟರ್, ಧ್ವನಿವರ್ಧಕ, ಹಾಗೂ ಮಕ್ಕಳಿಗೆ ಕಾನ್ವೆಂಟ್ ಮಾದರಿಯಲ್ಲಿ ಸಮವಸ್ತ್ರ, ಶೂ, ಟೈ , ಬ್ಯಾಗು, ಹಾಗೂ ಉಚಿತ ಲೇಖನಿ ಸಾಮಗ್ರಿ... ಹೀಗೆ ಈ ಶಾಲೆಯಲ್ಲಾದ ಚಮತ್ಕಾರಗಳ ಪಟ್ಟಿ ಉದ್ದವಾಗುತ್ತಲೇ  ಹೋಗುತ್ತದೆ.

2006ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಉನ್ನತ ದರ್ಜೆಗೇರಿತು. ಈಗ  ನಾಲ್ಕು ಶಿಕ್ಷಕರಿದ್ದಾರೆ. ಆಂಗ್ಲ ಭಾಷೆಯಲ್ಲಿ ಸಂಭಾಷಣೆ ನಡೆಸುವಷ್ಟು ಇಲ್ಲಿನ ಮಕ್ಕಳು ಸಶಕ್ತರಾಗಿದ್ದಾರೆ. ಈ ಶಾಲೆಯ ವಿದ್ಯಾರ್ಥಿ ತಂಡ ಬೆಟ್ಟಗುಡ್ಡಗಳ ಜೀವ ವೈವಿದ್ಯ ಕುರಿತು ನಡೆಸಿದ ವೈಜ್ಞಾನಿಕ ಸಂಶೋಧನಾ ಪ್ರಬಂಧಕ್ಕೆ ರಾಷ್ಟ್ರೀಯ ಬಾಲ ವಿಜ್ಞಾನಿ ಪ್ರಶಸ್ತಿ, 2010-11ರಲ್ಲಿ ತಾಲ್ಲೂಕಿನ ಉತ್ತಮಶಾಲೆ ಪ್ರಶಸ್ತಿ ಸಂದಿದೆ. ಶಿಕ್ಷಕ ಶಿವಶಂಕರ್  ಬ್ರಿಟಿಷ್ ಕೌನ್ಸಿಲ್‌ಗೆ ಆಯ್ಕೆಗೊಂಡು ಶಾಲಾ ಹಂತದಲ್ಲಿ ಸ್ಪೋಕನ್ ಇಂಗ್ಲಿಷ್ ತರಬೇತಿ ಪಡೆದು ಈಗ ಮಾರ್ಗದರ್ಶಕ ಶಿಕ್ಷಕರಾಗಿದ್ದಾರೆ.

ಅಂದಿನ ಶಾಲೆ ಸ್ಥಿತಿ ನೆನದರೆ ಮೈ ನಡುಕ ಬರುತ್ತದೆ. ವರ್ಗಾವಣೆ ಆಲೋಚನೆಯೂ ಬಂದಿತ್ತು. ಆದರೆ ಆಂತರ್ಯದಲ್ಲಿನ ಧೈರ್ಯ ಈ ಶಾಲೆ ಅಭಿವೃದ್ಧಿಗೆ ಪ್ರೇರಕ. ತನ್ನ ಮಗಳು ಕೂಡ ಈಗ ಇದೇ ಶಾಲೆ ವಿದ್ಯಾರ್ಥಿ ಎನ್ನುವಾಗ ಶಿವಶಂಕರ್ ಮೊಗದಲ್ಲಿ ಮಂದಹಾಸ.
 

No comments:

Post a Comment