Tuesday 22 November 2011

ನಗರದ ರಸ್ತೆಗಳಲ್ಲಿ ಕ್ಯಾಮರಾ ಕಣ್ಣು


ತುಮಕೂರು: ಸಂಚಾರಿ ವ್ಯವಸ್ಥೆ, ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಗರದ ರಸ್ತೆಗಳಿಗೆ ಗುಪ್ತ ವಿಡಿಯೋ ಕ್ಯಾಮರಾಗಳನ್ನು ಅಳವಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಮೆಟ್ರೋ ಪಾಲಿಟಿನ್ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಈ ವ್ಯವಸ್ಥೆ ಇನ್ನು ಕೆಲವೇ ತಿಂಗಳಲ್ಲಿ ನಗರದ ಪ್ರಮುಖ ರಸ್ತೆಗಳಲ್ಲೂ ಕಂಡುಬರಲಿದೆ.

ವಿಡಿಯೋ ಕ್ಯಾಮೆರಾಗಳು ರಸ್ತೆಯಲ್ಲಿ ಸಾಗುವ ಎಲ್ಲರನ್ನು ಸಂಪೂರ್ಣ ಸೆರೆ ಹಿಡಿಯಲಿವೆ. ಪ್ರಮುಖ ರಸ್ತೆಗಳಲ್ಲಿ ಅಳವಡಿಸುವ ಈ ಗುಪ್ತ ವಿಡಿಯೋ ಕ್ಯಾಮೆರಾಗಳು ದಿನದ 24 ಗಂಟೆ ಕಾರ್ಯನಿರ್ವಹಿಸಲಿದ್ದು, ಪೊಲೀಸರಿಗೆ ನಗರ ಸ್ಥಿತಿಗತಿ ಬಗ್ಗೆ ಗಮನ ಹರಿಸಲು ಸುಲಭವಾಗಲಿದೆ.

ಇಂಥ ವಿಡಿಯೋ ಕ್ಯಾಮೆರಾ ವ್ಯವಸ್ಥೆ ಬೆಂಗಳೂರು, ಮುಂಬೈನಂಥ ನಗರಗಳಲ್ಲಿ ಸಾಮಾನ್ಯ. ಆದರೆ ಈಗ ತುಮಕೂರಿಗೂ ಈ ವ್ಯವಸ್ಥೆ ಬರುತ್ತಿದೆ. ರಾಜಧಾನಿಗೆ ಹತ್ತಿರ ಇರುವ ನಗರ, ಭವಿಷ್ಯದ ಬೆಂಗಳೂರಿನ ಉಪ ನಗರಿ ಎಂದೇ ಗುರುತಿಸಿಕೊಂಡಿರುವ ತುಮಕೂರು ನಗರ ಕೆಲವೇ ದಿನಗಳಲ್ಲಿ ಮಹಾನಗರ ಪಾಲಿಕೆಯಾಗಲಿದೆ.

ಅಲ್ಲದೆ ಕಳೆದ ಕೆಲವು ವರ್ಷಗಳಿಂದೀಚೆಗೆ ನಾಗಾಲೋಟದಲ್ಲಿ ನಗರ ಬೆಳೆಯುತ್ತಿದ್ದು, ವಾಹನ ದಟ್ಟಣೆ, ಕಳ್ಳತನ ಮತ್ತಿತರ ಸಮಾಜಘಾತುಕ ಘಟನೆಗಳು ಕೂಡ ಹೆಚ್ಚಿವೆ. ರಸ್ತೆಗೆ ವಿಡಿಯೋ ಕ್ಯಾಮರಾ ಬಂದ ನಂತರ ಇಂಥ ಘಟನೆಗಳಿಗೆ ತಡೆ ಬೀಳಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರ ಭದ್ರತಾ ಮೂಲಸೌಕರ್ಯ ಯೋಜನೆಯಡಿ ವಿಡಿಯೋ ಕ್ಯಾಮರಾ ಅಳವಡಿಸಲಾಗುತ್ತಿದೆ. ಇದರಿಂದಾಗಿ ರಸ್ತೆಯಲ್ಲಾಗುವ ವಿವಿಧ ಬಗೆಯ ಅಪಘಾತಗಳು, `ಇಟ್ ಅಂಡ್ ರನ್ ಕೇಸ್` ಮುಂತಾದವನ್ನು ಸುಲಭವಾಗಿ ಕಂಡು ಹಿಡಿಯಬಹುದಾಗಿದೆ. ಅಲ್ಲದೇ ರಸ್ತೆ ನಿಯಮ ಪಾಲನೆ ಮಾಡದವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್ `ಪ್ರಜಾವಾಣಿ`ಗೆ ತಿಳಿಸಿದರು.

ಸಂಚಾರ ಸುವ್ಯವಸ್ಥೆ ಮಾತ್ರವಲ್ಲದೆ ನಗರದಲ್ಲಿ ಈಚೆಗೆ ಹೆಚ್ಚುತ್ತಿರುವ ಮನೆ, ಸರ ಕಳ್ಳತನ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ವಿಡಿಯೋ ಕ್ಯಾಮೆರಾ ಅಳವಡಿಸುವುದರಿಂದ ಬಹುತೇಕ ಸರಗಳ್ಳರನ್ನು ಹಿಡಿಯುವುದು ಸುಲಭವಾಗಲಿದೆ. ಅವ್ಯವಸ್ಥಿತ ಸಂಚಾರ ವ್ಯವಸ್ಥೆ ಕೂಡ ತಹಬದಿಗೆ ಬರಲಿದೆ ಎನ್ನಲಾಗಿದೆ.

ಮೊದಲ ಹಂತವಾಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಬಿ.ಎಚ್.ರಸ್ತೆ, ಗುಬ್ಬಿ ಗೇಟ್, ಎಂ.ಜಿ.ರಸ್ತೆ, ಎಸ್.ಎಸ್.ಪುರಂ ಸೇರಿದಂತೆ ನಗರದ ನೂರಕ್ಕೂ ಹೆಚ್ಚು ಕಡೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ಯೋಜನೆಗೆ ಹಣಕಾಸಿನ ತೊಂದರೆ ಇಲ್ಲ.

ಈಗಾಗಲೇ ಪೊಲೀಸ್ ಇಲಾಖೆ ಕ್ಯಾಮೆರಾ ಅಳವಡಿಸಲು ಬೇಕಾಗಿರುವ ಸ್ಥಳಗಳನ್ನು ಗುರುತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ನಗರದ ಎಲ್ಲ ಕಡೆ ಅಳವಡಿಸಲಾಗುವ ಕ್ಯಾಮೆರಾಗಳನ್ನು ಪೊಲೀಸ್ ಕಂಟ್ರೋಲ್ ರೂಂನಲ್ಲಿ ಇಡಲಾಗುವ ಸರ್ವರ್‌ಗೆ ಸಂಪರ್ಕ ಕಲ್ಪಿಸಲಾಗುತ್ತದೆ.
ಯಾವುದೇ ರಸ್ತೆಯಲ್ಲಿ ಏನೇ ಘಟಿಸಿದರೂ ಕಂಟ್ರೋಲ್ ರೂಂನಲ್ಲಿ ಕುಳಿತೇ ವೀಕ್ಷಿಸಬಹುದು. ಅಲ್ಲದೇ ಕಳ್ಳತನ ನಡೆದ ಸಂದರ್ಭದಲ್ಲಿ ಆ ವ್ಯಕ್ತಿ ಯಾವ ರಸ್ತೆಯಲ್ಲಿ ಹೋದನು ಎಂಬುದನ್ನು ವಿಡಿಯೋದಲ್ಲಿ ನೋಡಿಕೊಂಡು ಕೂಡಲೇ ಕಾರ್ಯಪ್ರವೃತ್ತರಾಗಬಹುದು ಎಂದು ಮೂಲಗಳು ಹೇಳಿವೆ.

No comments:

Post a Comment