Tuesday 22 November 2011

ಒಂದು ಸಾವಿರ ಮನೆ ನೆಲಸಮ ಭೀತಿ

ಮಧುಗಿರಿ: ತುಮಕೂರು- ರಾಯದುರ್ಗ ಮಾರ್ಗವಾಗಿ ನಿರ್ಮಾಣವಾಗುತ್ತಿರುವ ನೂತನ ರೈಲ್ವೆ ಯೋಜನೆಯಿಂದ ಪಟ್ಟಣದ 23 ನೇ ವಾರ್ಡ್ ಸೇರಿದಂತೆ ಸುಮಾರು ಸಾವಿರ ಮನೆಗಳು ನೆಲಸಮವಾಗುತ್ತವೆ ಎಂದು ಪುರಸಭಾಧ್ಯಕ್ಷ ಎಂ.ಕೆ. ನಂಜುಂಡಯ್ಯ ಆತಂಕ ವ್ಯಕ್ತ ಪಡಿಸಿದರು.
ಪಟ್ಟಣದ 23 ನೇ ವಾರ್ಡ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಮಾರ್ಗ ಬದಲಾಯಿಸುವಂತೆ ಒತ್ತಾಯಿಸುವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪುರಸಭಾ ವ್ಯಾಪ್ತಿಯ 23 ನೇ ವಾರ್ಡ್‌ನ ಮಧ್ಯಭಾಗದಲ್ಲಿ ರೈಲ್ವೆ ಹಳಿಯು ಹಾದು ಹೋಗುವುದರಿಂದ ಗೌರಿಬಿದನೂರು  ರಸ್ತೆಯಿಂದ ಪ್ರಾರಂಭವಾಗಿ ಗುರುವಡೇರಹಳ್ಳಿ ಸರ್ವೆ ನಂ. 5, 7, 8, 9, 23, 24, 25, 30, 31, 33, 35, 36, 39 ಹಾಗೂ ಅಗಸರಹೊಳೆಯಿಂದ ಶಾಂತಲಾ ಟಾಕೀಸ್, ತಾಲ್ಲೂಕು ಕಚೇರಿ ಹಿಂಭಾಗದಿಂದ ಕಾರಮರಡಿ ಮೂಲಕ ಪಾವಗಡ ರಸ್ತೆ ತಲುಪುವ ಸೂಚನೆಗಳಿವೆ.

ಇದರಿಂದ ಸುಮಾರು ಸಾವಿರ ಮನೆಗಳು ಹಾಗೂ ಭೂ ಪರಿವರ್ತನೆಗೊಂಡಿರುವ 500 ಕ್ಕೂ ಹೆಚ್ಚು ನಿವೇಶನಗಳು ಬಲಿಯಾಗಲಿವೆ. ಇದನ್ನು ತಪ್ಪಿಸಲು ಪಟ್ಟಣದ ಹೊರವಲಯದ ಮೂಲಕ ರೈಲ್ವೆ ಹಳಿ ನಿರ್ಮಿಸಬೇಕು ಒತ್ತಾಯಿಸಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪಾಂಡುರಂಗಾರೆಡ್ಡಿ, ನಾಗರಿಕ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಪುರಸಭಾ ಸದಸ್ಯರು ಹಾಗೂ  ಎಲ್ಲಾ ರಾಜಕೀಯ ಮುಖಂಡರು ನೇತೃತ್ವದಲ್ಲಿ ಸುಮಾರು 100 ಜನರ ನಿಯೋಗವು ಕೇಂದ್ರದ ರೈಲ್ವೆ ರಾಜ್ಯ ಸಚಿವ ಮುನಿಯಪ್ಪ ಅವರನ್ನು ಭೇಟಿ ಮಾಡಿ ಮನವಿ ಅರ್ಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಪುರಸಭಾ ಸದಸ್ಯರಾದ ಚಂದ್ರಶೇಖರ್‌ಬಾಬು, ಗೋವಿಂದರಾಜು, ಮುಖಂಡರಾದ ಬಸವರಾಜು , ಕೆ.ರಂಗನಾಥ್, ಚಂದ್ರು ಇನ್ನಿತರರು ಇದ್ದರು.

No comments:

Post a Comment